1946 ರಲ್ಲಿ ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಒಂದು ಮುಖ್ಯ ಸಮಸ್ಯೆ ತಲೆದೋರುತ್ತದೆ.
(ಆಗಸ್ಟ್ 15, 1947 ರಂದು ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಾಗ ರಚನೆಯಾದ ನೂತನ ಸರ್ಕಾರಕ್ಕೆ ಅತ್ಯಂತ ಗಂಭೀರವಾದ ಸಮಸ್ಯೆಯೊಂದು ಎದುರಾಯಿತು.ವಸಾಹತುಶಾಹಿ ಆಢಳಿತದಿಂದ ಸ್ವತಂತ್ರ, ಸಾರ್ವಭೌಮ ಕಲ್ಯಾಣರಾಜ್ಯವನ್ನು ನಿರ್ಮಿಸುವುದು ಅದರ ಜೊತೆಗೆ ಆಡಳಿತಾತ್ಮಕ ನಿರಂತರತೆಯನ್ನು ಕಾಯ್ದುಕೊಳ್ಳುವುದು ಅಂದಿನ ನಾಯಕರಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿತು. ಭಾರತದಂತಹ ವಿಶಾಲವಾದ ವೈವಿದ್ಯಮಯ ದೇಶವನ್ನು ಎರಡು ಶತಮಾನಕ್ಕೂ ಹೆಚ್ಚಿನ ಕಾಲ ಪರಿಣಾಮಕಾರಿಯಾಗಿ ಆಳಲು ಬ್ರಿಟಿಷರು ರೂಪಿಸಿದ್ದ ಭಾರತೀಯ ನಾಗರಿಕ ಸೇವೆಗಳನ್ನು (ICS) ಉಳಿಸಿಕೊಳ್ಲುವುದೇ ಅಥವಾ ದೇಶೀಯ ಮಾದರಿಯ ಆಢಳಿತ ವ್ಯವಸ್ಥೆಯನ್ನು ರೂಪಿಸುವುದೇ ಎಂಬ ಗೊಂದಲ ಹಾಗೆಯೇ ಇತ್ತು. ದೇಶದ ವಿಶಾಲ ಮತ್ತು ಸಂಕೀರ್ಣ ಅಗತ್ಯಗಳನ್ನು ನಿರ್ವಹಿಸಲು ಆಢಳಿತದ ಹೆಚ್ಚಿನ ಅನುಭವವಿರದ ಭಾರತದ ನಾಯಕರಿಗೆ ದಕ್ಷ ಮತ್ತು ಅನುಭವೀ ಆಢಳಿತಗಾರರ ಸಲಹೆ, ಸೂಚನೆಗಳ ಅಗತ್ಯವೂ ಸಾಕಷ್ಟಿತ್ತು. ಭಾರತವು ಸ್ವಾತಂತ್ರ್ಯ ಪಡೆದ ಬೆನ್ನಿನಲ್ಲಿಯೇ ಎದುರಾದ ಹಲವು ಸಂಕಟಗಳು, ಉದಾಹರಣೆಗೆ, ಭಾರತ-ಪಾಕಿಸ್ತಾನದ ವಿಭಜನೆಯ ವ್ಯಾಪಕ ಹಿಂಸೆ ಮತ್ತು ವಲಸಿಗರ ಸಮಸ್ಯೆ, ದೇಶೀಯ ಸಂಸ್ಥಾನಗಳನ್ನು ಒಟ್ಟುಗೂಡಿಸುವ ಹೊಣೆ, ಸಂವಿಧಾನದ ರಚನೆ, ಗೋವಾದಂತಹ ಇನ್ನೂ ಪರಕೀಯರ ಆಢಳಿತದಲ್ಲಿಯೇ ಮುಂದುವರೆದಿದ್ದ ಪ್ರಾಂತಗಳ ಸಮಸ್ಯೆ, ಕಾಶ್ಮೀರದ ಮೇಲೆ ಪಾಕಿಸ್ತಾನದ ಆಕ್ರಮಣಗಳಂತಹ ಸಂದರ್ಭದಲ್ಲಿ ನುರಿತ ಆಢಳಿತಯಂತ್ರದ ಪಾತ್ರ ಮಹತ್ವದ್ದಾಗಿತ್ತು.
ಆದರೆ, ಪಂಡಿತ್ ಜವಾಹರಲಾಲ್ ನೆಹರು ಹಾಗೂ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಬಹುತೇಕ ನಾಯಕರು ಬ್ರಿಟಿಷ್ ಸರ್ಕಾರದಲ್ಲಿ ಇದ್ದಂತ ನಾಗರಿಕ ಸೇವೆಯನ್ನು ಮುಂದುವರಿಸಲು ನಿರಾಸಕ್ತರಾಗಿದ್ದರು. ಬ್ರಿಟಿಷರು 200 ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತವನ್ನು ಆಳಲು, ಇಲ್ಲಿನ ಆಡಳಿತವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು, ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಅವರ ಅಚ್ಚುಕಟ್ಟಾದ ಮತ್ತು ಆಜ್ಞಾಧಾರಿಯಾದ ನಾಗರಿಕ ಸೇವೆಗಳ ಕಾರಣ ಎಂಬುದು ಅವರ ನಂಬಿಕೆಯಾಗಿತ್ತು. ಈ ಗೊಂದಲದ ಸಂದರ್ಭದಲ್ಲಿ ಸ್ಥಿರವಾದ ಆಡಳಿತಾತ್ಮಕ ಚೌಕಟ್ಟಿನ ಪ್ರಾಮುಖ್ಯತೆಯನ್ನು ಗುರುತಿಸಿದ ಸರ್ದಾರ ವಲ್ಲಭಬಾಯಿ ಪಟೇಲ್ ಬ್ರಿಟಿಷ್ ನಾಗರಿಕ ಸೇವಾ ವ್ಯವಸ್ಥೆಯ ಮುಂದುವರಿಕೆಗೆ ಬಲವಾಗಿ ಪ್ರತಿಪಾದಿಸಿದರು. ಭಾರತವು ಆ ಸಮಯದಲ್ಲಿ ಎದುರಿಸಬೇಕಿದ್ದ ಸಮಸ್ಯೆಗಳ ನಡುವೆ ಬಹುಕಾಲದಿಂದ ಅಸ್ತಿತ್ವದಲ್ಲಿರುವ ಆಡಳಿತ ರಚನೆಯನ್ನು ಹಠಾತ್ತನೆ ಕಿತ್ತುಹಾಕುವುದು ಅವ್ಯವಸ್ಥೆ ಮತ್ತು ಅಸಮರ್ಥತೆಗೆ ಕಾರಣವಾಗಬಹುದು ಎಂದು ಅವರು ಅರ್ಥಮಾಡಿಕೊಂಡರು. ಪಟೇಲರು ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಭಾರತೀಯ ಮೌಲ್ಯಗಳು ಮತ್ತು ಅಗತ್ಯಗಳನ್ನು ಪ್ರತಿಬಿಂಬಿಸಲು ಅದನ್ನು ಸುಧಾರಿಸುವ ಬಗ್ಗೆ ಕಾಳಜಿ ವಹಿಸಿದರು. ಈ ರೀತಿ ʼಭಾರತದ ಉಕ್ಕಿನ ಕವಚʼ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಂದ ಕರೆಯಲ್ಪಟ್ಟ ನಾಗರಿಕ ಸೇವೆಗಳು ಭಾರತದ ಆಡಳಿತವನ್ನು ಮುನ್ನಡೆಸಿ ಸುಮಾರು 78 ವರ್ಷಗಳ ಆಡಳಿತದಲ್ಲಿ ಸ್ವತಂತ್ರ ಭಾರತವನ್ನು ಭದ್ರವಾಗಿಸಿ, ಜಗತ್ತಿನ ಶಕ್ತಿಯುತ ರಾಷ್ಟ್ರವಾಗಿಸುವತ್ತ ಕೊಡುಗೆ ನೀಡಿವೆ.
ಒಂದು ಸಮಾಜ ಶಾಂತಿಯುತವಾಗಿರಲು, ಸಮೃದ್ಧವಾಗಿರಲು ಸದೃಢ ಮತ್ತು ದಕ್ಷ ಸರಕಾರ ಅತ್ಯಂತ ಅವಶ್ಯಕ. ಸದೃಢ ಸರಕಾರವು ದೇಶದ ಗಡಿಗಳನ್ನು ಸುರಕ್ಷಿತವಾಗಿರಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತದೆ. ಇಂತಹ ಭಯ ಮುಕ್ತ ವಾತಾವರಣದಲ್ಲಿ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ, ಸಮಾಜದ ಏಳಿಗೆ ಸಾಧ್ಯ. ಸಮಾಜದ ಏಳಿಗೆಯ ಜೊತೆಗೆ, ಸಂಸ್ಕೃತಿಯ ಬೆಳವಣಿಗೆಯಾಗುತ್ತದೆ.
ಸರಕಾರವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನಾಗರೀಕ ಸೇವೆಗಳ ಪಾತ್ರ ದೊಡ್ಡದು. ಜನ ಪ್ರತಿನಿಧಿಗಳ ಜೊತೆ ಕೈ ಜೋಡಿಸಿ ನಾಗರಿಕ ಸೇವೆಯ ಅಧಿಕಾರಿಗಳು ಆಡಳಿತ ಯಂತ್ರವನ್ನು ನಿರ್ವಹಿಸುತ್ತಾರೆ. ಸರಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಸರಕಾರ ತೆಗೆದುಕೊಂಡ ನಿರ್ಧಾರಗಳನ್ನು ಸಮರ್ಪಕವಾಗಿ ಜಾರಿಗೆ ತರುವುದು ಕೂಡ ಅಧಿಕಾರಿಗಳ ಜವಾಬ್ದಾರಿ. ಈ ರೀತಿ ಜನರಿಂದ ಚುನಾಯಿಸಲ್ಪಟ್ಟ ಸರಕಾರದ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಅಧಿಕಾರಿಗಳು ದೇಶದ ಏಳಿಗೆಗೆ ಕೊಡುಗೆ ನೀಡುತ್ತಾರೆ.
ನಮ್ಮ ದೇಶದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಂಗೀಕರಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರೀಕ ಸೇವೆಗಳು ಪ್ರಮುಖ ಕಾರ್ಯನಿರ್ವಹಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ. ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯಿಂದ ಮಾತ್ರ ಪ್ರಜೆಗಳಿಂದ ಚುನಾಯಿಸಲ್ಪಟ್ಟ ಪಕ್ಷವು ಅಧಿಕಾರಕ್ಕೆ ಬರಲು ಸಾಧ್ಯ. ಭಾರತದಲ್ಲಿ ನಿಷ್ಪಕ್ಷಪಾತ, ಭಯ ಮುಕ್ತ ಚುನಾವಣೆಗೆ ಶ್ರೀ ಟಿ. ಎನ್. ಶೇಷನ್ರಂತಹ ನಾಗರಿಕ ಸೇವಾ ಅಧಿಕಾರಿಗಳ ಕೊಡುಗೆ ಅವಿಸ್ಮರಣೀಯ. ಶ್ರೀ ಟಿ. ಎನ್. ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ಬಹುಮುಖ್ಯ ಸುಧಾರಣೆಗಳನ್ನು ತಂದರು. ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿ ಚುನಾವಣೆಯಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆದು, ಯಾವುದೇ ಒತ್ತಾಯಕ್ಕೂ ಬಗ್ಗದೆ ಚುನಾವಣೆಯ ಪ್ರಕ್ರಿಯೆಯನ್ನು ಸ್ವಚ್ಛಗೊಳಿಸಿದ್ದು ಇಂದು ಇತಿಹಾಸ. ಚುನಾವಣೆಯ ಸಂದರ್ಭದಲ್ಲಿ ಸಂಪೂರ್ಣ ಆಡಳಿತ ಯಂತ್ರ ಅಧಿಕಾರಿಗಳ ಕೈಯಲ್ಲಿ ಇರುತ್ತದೆ. ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಯಾವುದೇ ಧಕ್ಕೆ ಬರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಒಂದು ದೊಡ್ಡ ಸವಾಲು. ಈ ಸವಾಲನ್ನು ಸ್ವೀಕರಿಸಿ ರಾಜಕೀಯ ಸ್ಥಿರತೆಗೆ ಕಾರಣಕರ್ತರು ನಾಗರಿಕ ಸೇವಾ ಅಧಿಕಾರಿಗಳು.
ನಮ್ಮ ದೇಶ ವೈವಿಧ್ಯಮಯ ರಾಷ್ಟ್ರ. ಇಲ್ಲಿ ವಿವಿಧ ಧರ್ಮ, ಭಾಷೆ, ಸಂಸ್ಕೃತಿ, ಜೀವನ ಶೈಲಿ ಸಮ್ಮೇಳಿತವಾಗಿದೆ. ಇಂತಹ ರಾಷ್ಟ್ರದಲ್ಲಿ ವಿವಿಧ ಗುಂಪುಗಳು ಸಾಮರಸ್ಯವಾಗಿ ಜೀವಿಸಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಅಗತ್ಯ. ಕಾನೂನನ್ನು ಸಮರ್ಪಕವಾಗಿ, ಎಂತಹ ಸಂದರ್ಭದಲ್ಲೂ ನಿಷ್ಪಕ್ಷಪಾತವಾಗಿ ಜಾರಿಗೆ ತರುವ ಜವಾಬ್ದಾರಿ ನಾಗರೀಕ ಸೇವೆಯ ಅಧಿಕಾರಿಗಳ ಕೈಯಲ್ಲಿ ಇರುತ್ತದೆ. ಎಷ್ಟು ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿ ಯಾವುದೇ ರೀತಿಯ ಹಿಂಸಾಚಾರಕ್ಕೆ ಕಾರಣವಾಗದಂತೆ ನೋಡಿಕೊಳ್ಳಬೇಕು. ಸ್ವಲ್ಪ ಎಡವಟ್ಟಾದರೂ ಶಾಂತಿ ಭಂಗಗೊಂಡು ಸಮಾಜದ ಸ್ವಾಸ್ಥ್ಯ ಕೆಡುವುದು.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ನಾಗರಿಕ ಸೇವೆಯ ಅಧಿಕಾರಿಗಳು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿವರ್ಷ ಸರಕಾರವು ಬಿಲಿಯನ್ಗಳಷ್ಟು ಹಣವನ್ನು ತೊಡಗಿಸುತ್ತದೆ. ಜನರಿಂದ ತೆರಿಗೆಯ ಮೂಲಕ ಸಂಗ್ರಹವಾದ ಹಣವನ್ನು, ಬೇರೆ ಸಂಸ್ಥೆಗಳಿಂದ ಹಾಗೂ ಬೇರೆ ದೇಶಗಳಿಂದ ಸಾಲ ತೆಗೆದುಕೊಂಡು ಜನರ ಆಶೋತ್ತರಗಳಿಗೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ. ಇಷ್ಟು ದೊಡ್ಡ ಮೊತ್ತದ ಸಂಪನ್ಮೂಲದ ಸಮರ್ಪಕವಾದ ಬಳಕೆಯಿಂದ ಮೂಲಸೌಕರ್ಯದ ಅಭಿವೃದ್ಧಿಯಾಗಿ ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. ಮೆಟ್ರೋ ಮ್ಯಾನ್ ಖ್ಯಾತಿಯ ಶ್ರೀಧರನ್ ದೆಹಲಿ ಮೆಟ್ರೋದಂತಹ ಸಂಕೀರ್ಣ ಯೋಜನೆಯನ್ನು ಗುರಿಗಿಂತ ಮುಂಚೆಯೇ ಮುಗಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ. ಇಂದು ಮೆಟ್ರೋ ರೈಲು ಭಾರತದ ಬಹುತೇಕ ನಗರಗಳಲ್ಲಿ ಚಲಿಸಲು ದೆಹಲಿ ಮೆಟ್ರೋದ ಯಶಸ್ಸೇ ಕಾರಣ. ಮೂಲಸೌಕರ್ಯ ಅಭಿವೃದ್ಧಿಯು ಖಾಸಗಿ ಸಂಸ್ಥೆಗಳ ಬೆಳವಣಿಗೆಗೆ ಅತ್ಯಂತ ಅವಶ್ಯಕ. ಬೆಳವಣಿಗೆಯಿಂದ ಜನರ ಜೀವನಮಟ್ಟ ಸುಧಾರಿಸಿ ಸಮಾಜದ ಏಳಿಗೆ ಸಾಧ್ಯ. ಜೊತೆಗೆ ತೆರಿಗೆ ಸಂಗ್ರಹ ಜಾಸ್ತಿಯಾಗಿ ಪುನಃ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ದೊರೆಯುವುದು.
ವಿಕೋಪಗಳ ಸಂದರ್ಭದಲ್ಲಿ ಸರಕಾರದ ಸಂಪೂರ್ಣ ಯಂತ್ರವು ನಿರ್ವಹಣೆಯಲ್ಲಿ ತೊಡಗಿರುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಇಂತಹ ಸಂದರ್ಭಗಳಲ್ಲಿ ನಾಗರಿಕ ಸೇವೆಯ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಇಡೀ ಸಮಾಜ ಸರಕಾರದತ್ತ ಮುಖ ಮಾಡಿರುತ್ತದೆ. ಜನರ ಜೀವ, ಆಸ್ತಿಪಾಸ್ತಿ ಹಾನಿಯಾಗದಂತೆ ನೋಡಿಕೊಂಡು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ಮರಳುವಂತೆ ನೋಡಿಕೊಳ್ಳಬೇಕು. ನಂತರ ತಜ್ಞ ತಂಡದ ಜೊತೆಗೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು.
ಈ ರೀತಿಯಾಗಿ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಹಾಸು ಹೊಕ್ಕಾದಂತ ನಾಗರೀಕ ಸೇವೆಯ ನಾಗರಿಕ ಸೇವೆಗಳು ಯಾವುವು? ವಿಶಾಲವಾಗಿ ನೋಡಿದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಹುದ್ದೆಗಳು ನಾಗರಿಕ ಸೇವೆಗಳೇ. ಸರಕಾರದ ಮೂಲ ಉದ್ದೇಶವೇ ಸಾರ್ವಜನಿಕ ಸೇವೆಯಾದುದರಿಂದ ಎಲ್ಲಾ ಹುದ್ದೆಗಳು ಉದ್ದೇಶ ನಾಗರಿಕ ಸೇವೆಯಾಗಿರುತ್ತದೆ. ಮುಖ್ಯವಾಗಿ ನಾವು ಇಲ್ಲಿ ಚರ್ಚಿಸುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಉನ್ನತ ಸೇವೆಗಳ ಬಗ್ಗೆ. ಕೇಂದ್ರ ಸರಕಾರದಲ್ಲಿ ಉನ್ನತ ಸೇವೆಗಳ ನೇಮಕಾತಿಯನ್ನು ಕೇಂದ್ರ ಲೋಕಸೇವಾ ಆಯೋಗ ( Union Public Service Commission – UPSC) ನಿರ್ವಹಿಸುತ್ತದೆ. ಕೇಂದ್ರ ಲೋಕಸೇವಾ ಆಯೋಗದ ಅಡಿಯಲ್ಲಿ ಪ್ರಮುಖ ನಾಗರಿಕ ಸೇವೆಗಳಾದಂತ IAS, IPS, IRS, IRMS ಈ ರೀತಿ ಇಪ್ಪತ್ತಕ್ಕೂ ಹೆಚ್ಚು ಸೇವೆಗಳಿಗೆ ನಾಗರಿಕ ಸೇವಾ ಪರೀಕ್ಷೆಯ ಮೂಲಕ ನೇಮಕಾತಿ ನಡೆಯುತ್ತದೆ. ನಾಗರಿಕ ಸೇವಾ ಪರೀಕ್ಷೆಯು ಪ್ರತಿವರ್ಷ ಮೂರು ಹಂತಗಳಲ್ಲಿ ನಡೆಯುತ್ತದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಈ ರೀತಿಯಲ್ಲಿ ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಇದೇ ರೀತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಸರ್ಕಾರದ ಉನ್ನತ ಸೇವೆಗಳಲ್ಲಿ ಪರೀಕ್ಷೆಯನ್ನು ನಡೆಸುತ್ತದೆ.
ನಾಗರಿಕ ಸೇವಾ ಪರೀಕ್ಷೆಯು ತುಂಬಾ ಸ್ಪರ್ಧಾತ್ಮಕವಾಗಿದೆ. ಒಂದು ಸಲ ಪರೀಕ್ಷೆಯಲ್ಲಿ ಪಾಸಾಗಿ ಆಡಳಿತದ ಚುಕ್ಕಾಣಿ ಹಿಡಿದಂತ ನಾಗರಿಕ ಸೇವಾ ಅಧಿಕಾರಿಯು ಮುಂದಿನ 30 ರಿಂದ 35 ವರ್ಷಗಳ ಕಾಲ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಈ ರೀತಿಯ ಜವಾಬ್ದಾರಿ ಕೆಲಸವನ್ನು ನಿರ್ವಹಿಸಲು ಸೂಕ್ತ ಅರ್ಹತೆಯ ಅವಶ್ಯಕತೆ ಇರುವುದರಿಂದ ನಾಗರಿಕ ಸೇವಾ ಪರೀಕ್ಷಾರ್ಥಿ ಗಳಿಂದ ಕಠಿಣ ಪರಿಶ್ರಮವನ್ನು ಬಯಸುತ್ತದೆ. ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪೂರ್ವಭಾವಿ ಪರೀಕ್ಷೆಯನ್ನು ಬರೆಯುತ್ತಾರೆ. ಇವರಲ್ಲಿ 0.1% ಗಿಂತಲೂ ಕಡಿಮೆ ಜನ ಕೊನೆಯದಾಗಿ ಉತ್ತೀರ್ಣರಾಗಿ ವಿವಿಧ ಸೇವೆಗಳಿಗೆ ಅರ್ಹರಾಗುತ್ತಾರೆ. ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ, ರಾಜನೀತಿ, ಅರ್ಥವ್ಯವಸ್ಥೆ, ಜಾಗತಿಕ ವಿದ್ಯಮಾನಗಳನ್ನು ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಐಚ್ಛಿಕ ವಿಷಯವೂ ಕೂಡ ಗಹನವಾದ ಅಧ್ಯಯನವನ್ನು ಮಾಡಿ ಒಬ್ಬ ವಿಷಯ ತಜ್ಞರಿಗೆ ಇರುವಷ್ಟು ಜ್ಞಾನವನ್ನು ಹೊಂದಬೇಕಾಗುತ್ತದೆ.
ಇಷ್ಟು ಕಷ್ಟದ ಪರೀಕ್ಷೆಯನ್ನು ಯಾಕೆ ಬರೆಯಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ. ಪ್ರತಿಯೊಬ್ಬರಿಗೂ ತಾನು ಕಷ್ಟಪಟ್ಟು ಒಂದು ಒಳ್ಳೆಯ ಕೆಲಸ ಹಿಡಿದು ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕೆಂಬ ಆಶಯ ಇರುವುದು. ಈ ಒಂದು ಆಶಯವನ್ನು ನಾಗರಿಕ ಸೇವೆಗಳು ಸಂಪೂರ್ಣ ಗೊಳಿಸುವುದೇ?. ಖಂಡಿತ ಹೌದು. ನಾಗರಿಕ ಸೇವೆಗಳ ಉದ್ದೇಶ ಹಾಗೂ ಪಾತ್ರವನ್ನು ಈಗಾಗಲೇ ನೋಡಿದ್ದೀರಿ. ನಾವು ಮಾಡುತ್ತಿರುವ ಕೆಲಸ ಒಂದು ನಮ್ಮನ್ನ ಉನ್ನತ ಉದ್ದೇಶದತ್ತ ಕೊಂಡೊಯ್ಯಬೇಕು ಎನ್ನುವ ಆಶಯ ಬಹಳಷ್ಟು ಜನರಿಗೆ ಇರುತ್ತದೆ. ಹಣವು ಒಂದೇ ಕೆಲಸದ ಉದ್ದೇಶವಲ್ಲ. ಹಾಗಂತ ಹಣ ಮುಖ್ಯ ಎಂದಲ್ಲ. ಒಂದು ಯೋಗ್ಯ ಜೀವನವನ್ನು ಜೀವಿಸಲು ಹಣ ಬೇಕು. ಈ ಹಣದ ಜೊತೆಗೆ ನಾವು ಮಾಡುವ ಕೆಲಸ ಸಮಾಜಮುಖಿಯಾಗಿರಬೇಕು ಎಂದು ಭಾವಿಸುವವರಿಗೆ ನಾಗರಿಕ ಸೇವೆ ಸರಿಯಾದ ಆಯ್ಕೆ.
ನಾಗರಿಕ ಸೇವೆಯ ಅಧಿಕಾರಿಗಳು ಮೊದಲನೆಯ ದಿನದಿಂದ ಇಲಾಖೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಹಾಗೂ ಪ್ರತಿದಿನ ನೂರಾರು ಸಿಬ್ಬಂದಿಗಳ ಮುಂದಾಳತ್ವವನ್ನು ವಹಿಸುತ್ತಾರೆ. ಇಲಾಖೆಗೆ ಸಂಬಂಧಪಟ್ಟಂತೆ ಕೋಟ್ಯಂತರ ರೂಪಾಯಿ ನಿರ್ವಹಣೆ, ಖರ್ಚಿಗೆ ಸಂಬಂಧಪಟ್ಟ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ದೊರೆಯುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಸಿಗುವ ಆತ್ಮತೃಪ್ತಿ ಯಾವ ಕೆಲಸದಿಂದಲೂ ಸಿಗುವುದಿಲ್ಲ ಎನ್ನುವ ಎನ್ನುವುದು ನನ್ನ ಅಭಿಪ್ರಾಯ. ಈ ಸಂದರ್ಭದಲ್ಲಿ ನನ್ನ ಕೆಲಸದ ಅನುಭವದಿಂದ ಒಂದು ಉದಾಹರಣೆಯನ್ನು ನೀಡುವುದು ಸೂಕ್ತವೆಂದು ನಾನು ಪರಿಗಣಿಸುತ್ತೇನೆ.
2019 ರಲ್ಲಿ ನಾನು ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ ಸಾರಿಗೆ ವಿಭಾಗದ ಮುಖ್ಯಸ್ಥನಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಒಂದು ಸಂಜೆ 8 ಗಂಟೆ ಸುಮಾರಿಗೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಯವರು ಕರೆ ಮಾಡಿ ಸಮೀಪದ ಅಣೆಕಟ್ಟಿನಿಂದಾಗಿ ಹೊಳೆ ಆಲೂರು ಗ್ರಾಮವು ಜಲಾವೃತವಾಗಿದೆ ಮತ್ತು 1000 ಕ್ಕೂ ಹೆಚ್ಚು ಜನರನ್ನು ತಕ್ಷಣ ಸ್ಥಳಾಂತರಿಸಬೇಕಾಗಿದೆ ಎಂದು ತಿಳಿಸಿದರು. ನೀರಿನಿಂದಾಗಿ ಎಲ್ಲ ರಸ್ತೆಗಳು ಸಂಪರ್ಕ ಕಡಿತಗೊಂಡು ಉಳಿದಿರುವ ಏಕೈಕ ಆಯ್ಕೆ ರೈಲ್ವೆ ಮಾರ್ಗವಾಗಿತ್ತು. ಈ ಜನರನ್ನು ಗದಗದಲ್ಲಿರುವ ಪುನರ್ವಸತಿ ಶಿಬಿರಕ್ಕೆ ಸ್ಥಳಾಂತರಿಸಲು ಹೊಳೆ ಆಲೂರು ನಿಲ್ದಾಣದಿಂದ ಗದಗಕ್ಕೆ ವಿಶೇಷ ರೈಲು ಓಡಿಸುವಂತೆ ಮನವಿ ಮಾಡಿದರು. ನಾವು ತಕ್ಷಣ ಕಾರ್ಯಾಚರಣೆಗೆ ಇಳಿದೆವು ಮತ್ತು 2 ಗಂಟೆಗಳಲ್ಲಿ ಹೊಳೆಆಲೂರಿಗೆ ವಿಶೇಷ ರೈಲನ್ನು ಓಡಿಸಿ 1000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆವು. ಜನರು ಮೇಕೆ ಸೇರಿದಂತೆ ತಮ್ಮ ಎಲ್ಲ ಸಾಮಾನುಗಳೊಂದಿಗೆ ರೈಲು ಹತ್ತುತ್ತಿದ್ದದ್ದು ನನಗೆ ಇನ್ನೂ ನೆನಪಿದೆ. ಖಾಸಗಿ ವಲಯದಲ್ಲಿ ಇಂತಹ ಅವಕಾಶಗಳು ಅಪರೂಪ.
ಆದ್ದರಿಂದ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಅಗಾಧವಾದ ಅವಕಾಶವನ್ನು ನೀಡುವ ನಾಗರಿಕ ಸೇವೆಗಳಿಗೆ ಉತ್ತಮ, ಪ್ರಾಮಾಣಿಕ ಮತ್ತು ಸರಳ ಜನರು ಸೇರುವ ಅವಶ್ಯಕತೆಯಿದೆ. ಉತ್ತರ ಕನ್ನಡ ಜಿಲ್ಲೆ ತನ್ನ ಸಂಸ್ಕೃತಿ, ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದೆ. ಈ ಪ್ರದೇಶದ ವಿದ್ಯಾರ್ಥಿಗಳು ಸರಿಯಾದ ಗಮನ ಮತ್ತು ನಿರ್ದೇಶನದೊಂದಿಗೆ ನಾಗರಿಕ ಸೇವೆಗಳ ಸವಾಲನ್ನು ಸುಲಭವಾಗಿ ಭೇದಿಸಬಹುದು ಎಂದು ನನಗೆ ಖಾತ್ರಿಯಿದೆ. ಸ್ವರ್ಣ ರಶ್ಮಿ ಪ್ರತಿಷ್ಠಾನವು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಸರಿಯಾದ ಜನರನ್ನು ಒಟ್ಟುಗೂಡಿಸಲು ಶ್ರೀ ಸ್ವರ್ಣವಲ್ಲೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ದಿಕ್ಕಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಹೆಚ್ಚಿನ ಎತ್ತರಕ್ಕೆ ಏರಬೇಕೆಂದು ಹಾರೈಸುತ್ತೇನೆ. ಜೈ ಹಿಂದ್.
(ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂಪೂರ್ಣವಾಗಿ ವೈಯಕ್ತಿಕ)
ಸಂತೋಷ್ ಹೆಗಡೆ,IRTS