ನಾಗರಿಕ ಸೇವೆಗಳಿಗೆ ತೇರ್ಗಡೆಯಾಗುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಅವಲೋಕನವನ್ನು ಮಾಡೋಣ. ಕೇಂದ್ರ ಲೋಕಸೇವಾ ಆಯೋಗವು (Union Public Service Commission) ಪ್ರತಿವರ್ಷವು ನಾಗರಿಕ ಸೇವೆಗಳಿಗೆ ಪರೀಕ್ಷೆಗಳನ್ನು ಆಯೋಜಿಸುತ್ತದೆ. ಇದನ್ನು ತೇರ್ಗಡೆಯಾಗುವ ಮೂಲಕ ನಾಗರಿಕ ಸೇವೆಗಳಿಗೆ ಆಯ್ಕೆಯಾಗಬಹುದು. ಪ್ರತಿ ವರ್ಷವೂ ಆಯೋಜಿಸುವ ಪರೀಕ್ಷೆಗಳಲ್ಲಿ ಮುಖ್ಯವಾಗಿ ಇಂಡಿಯನ್ ಸಿವಿಲ್ ಸರ್ವಿಸ್, ಇಂಡಿಯನ್ ಫಾರೆಸ್ಟ್ ಸರ್ವಿಸ್, ಇಂಡಿಯನ್ ಇಂಜಿನಿಯರಿಂಗ್ ಸರ್ವಿಸ್ ಎಂಬ ಪರೀಕ್ಷೆಗಳು ಇರುತ್ತವೆ. ಇವುಗಳಲ್ಲಿ ಅತಿ ಪ್ರಸಿಧ್ಧವಾದ ಪರೀಕ್ಷೆ ಇಂಡಿಯನ್ ಸಿವಿಲ್ ಸರ್ವಿಸ್. ಇಂಡಿಯನ್ ಸಿವಿಲ್ ಸರ್ವಿಸ್ ಅನ್ನು ಯಾವುದೇ ಪದವೀಧರ ಬರೆಯಬಹುದಾಗಿದೆ.
ಇಂಡಿಯನ್ ಸಿವಿಲ್ ಸರ್ವಿಸ್ ಹಾಗೂ ಅದರ ತಯಾರಿಗೆ ಬೇಕಾದ ಅಂಶಗಳು
ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಮೂರು ಹಂತಗಳಲ್ಲಿ ಅಂದರೆ ಪೂರ್ವಭಾವಿ ಪರೀಕ್ಷೆ(Prelims) , ಮುಖ್ಯ ಪರೀಕ್ಷೆ (Mains), ವ್ಯಕ್ತಿತ್ವ ಪರೀಕ್ಷೆ(Personality Test) ಆಯೋಜಿಸಲಾಗುತ್ತದೆ. ಈ ಪರೀಕ್ಷೆಗಳು ವ್ಯಕ್ತಿಯ ಸರ್ವಾಂಗೀಣ ತಿಳುವಳಿಕೆಯನ್ನು ಅಪೇಕ್ಷಿಸುತ್ತವೆ. ಆದ್ದರಿಂದ ಅಭ್ಯರ್ಥಿಯು ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ, ಕಲೆ ಮತ್ತು ಸಂಸ್ಕೃತಿ, ಸಂವಿಧಾನ, ಜೊತೆ ಜೊತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪರಿಣಿತಿಯನ್ನು ಹೊಂದಿರುವ ಅವಶ್ಯಕತೆ ಇರುತ್ತದೆ.
ಸುಮಾರು ಒಂದು ಸಾವಿರ ಹುದ್ದೆಗಳಿಗೆ ಪ್ರತಿವರ್ಷವು ಸುಮಾರು 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪಧಿ೯ಸುವುದರಿಂದ ಪ್ರತಿಯೊಂದು ಸುತ್ತಿನಲ್ಲಿ ತೇರ್ಗಡೆಯಾಗಲು ಕಠಿಣ ಪರಿಶ್ರಮದ ಅವಶ್ಯಕತೆ ಇರುತ್ತದೆ . ಆದ್ದರಿಂದ ಅಭ್ಯರ್ಥಿಗಳು ಸುಮಾರು ಪರೀಕ್ಷೆಗೆ ಒಂದು ವರ್ಷ ಮೊದಲೇ ತಮ್ಮ ಅಭ್ಯಾಸ ಪ್ರಾರಂಭಿಸಬೇಕಾಗುತ್ತದೆ.
ಅಭ್ಯರ್ಥಿಗಳು ತಯಾರಿಯ ಪೂರ್ವಭಾವಿ ಅಂಗವಾಗಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಬೇಕು. ಇದರಿಂದಾಗಿ ಯಾವ ಯಾವ ಕ್ಷೇತ್ರಗಳಲ್ಲಿ ಹೆಚ್ಚಿನ ಗಮನವಹಿಸಬೇಕು, ಎಂಬುದು ತಿಳಿದು ಬರುತ್ತದೆ. ಹೀಗೆ ಮಾಡುವುದರಿಂದ ಮಹತ್ವವಿಲ್ಲದ ಕ್ಷೇತ್ರಗಳಲ್ಲಿ ಅನ್ಯಥ ಸಮಯ ವ್ಯರ್ಥವಾಗುವುದು ಕಡಿಮೆಯಾಗುತ್ತದೆ.
ಅಭ್ಯರ್ಥಿಗಳು ಸುಮಾರು ಆರರಿಂದ ಎಂಟು ತಿಂಗಳು ಪೂರ್ವಭಾವಿ ಪರೀಕ್ಷೆ(Prelims) , ಮುಖ್ಯ ಪರೀಕ್ಷೆ (Mains) ಗಳೆರಡನ್ನು ಜೊತೆ ಜೊತೆಯಾಗಿ ಅಭ್ಯಾಸ ಮಾಡಬೇಕಾಗುತ್ತದೆ. ನಂತರದ 3-4 ತಿಂಗಳು ಪೂರ್ವಭಾವಿ ಪರೀಕ್ಷೆಯ ತಯಾರಿಗೆ ಮುಡಿಪಿಡಬೇಕಾಗುತ್ತದೆ.
ಪೂರ್ವಭಾವಿ ಪರೀಕ್ಷೆ ತಯಾರಿ
ಈ ಪರೀಕ್ಷೆಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳು ಇರುತ್ತದೆ. ಸಾಮಾನ್ಯ ಅಧ್ಯಯನ ಪತ್ರಿಕೆ-1 ರಲ್ಲಿ ನೂರು ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ ಎರಡು ಅಂಕಗಳಿರುತ್ತವೆ. ಈ ಪರೀಕ್ಷೆಯಲ್ಲಿ ವಿಷಯಜ್ಞಾನದ ಜೊತೆ ಜೊತೆಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅಭ್ಯರ್ಥಿಯ ಆಳವಾದ ತಿಳುವಳಿಕೆ ಅಗತ್ಯ. ಈ ಪರೀಕ್ಷೆಯಲ್ಲಿ ಕೇವಲ ಸಂಗತಿಗಳು ಮತ್ತು ಅಂಕಿ- ಅಂಶಗಳಷ್ಟೇ ಅಲ್ಲದೆ ಅಭ್ಯರ್ಥಿಯ ತುಲನಾತ್ಮಕ, ಗ್ರಹಿಸಿದ ವಿಷಯವನ್ನು ಹೇಗೆ ಅನ್ವಯಿಸುತ್ತಾರೆ ಎಂಬ ಅಂಶಗಳು ಪರೀಕ್ಷಿಸಲ್ಪಡುತ್ತದೆ. ಆದ್ದರಿಂದ ಅಭ್ಯರ್ಥಿಗಳು ವಿಷಯಜ್ಞಾನದ ಜೊತೆ ಜೊತೆಗೆ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು ಹಾಗೂ ಅಣಕು ಪರೀಕ್ಷೆಗಳನ್ನು (Mock tests) ಎದುರಿಸಬೇಕು.
ಸಾಮಾನ್ಯ ಅಧ್ಯಯನ ಪತ್ರಿಕೆ-2 (Civil Services Aptitude Test) aptitude ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಅಭ್ಯರ್ಥಿಗಳು 33% ಅಂಕಗಳನ್ನು ಪಡೆದರೆ ಸಾಕು. ವರ್ಷದಿಂದ ವರ್ಷಕ್ಕೆ ಈ ಪತ್ರಿಕೆಯನ್ನು ಕ್ಲಿಷ್ಟಗೊಳಿಸುತ್ತಾ ಸಾಗಿರುವುದರಿಂದ ಅಭ್ಯರ್ಥಿಗಳು ಪ್ರತಿದಿನ ನಿಗದಿತ ವೇಳೆಯನ್ನು ಈ ಪರೀಕ್ಷೆಗಾಗಿ ಮೀಸಲಾಗಿಡಬೇಕು.
ಮುಖ್ಯ ಪರೀಕ್ಷೆಯ ತಯಾರಿ
ಈ ಪರೀಕ್ಷೆಯಲ್ಲಿ ಒಂಬತ್ತು ಪ್ರಶ್ನೆ ಪತ್ರಿಕೆ ಇರುತ್ತದೆ. ಇದರಲ್ಲಿ ಏಳು ಪತ್ರಿಕೆಗಳ ಅಂಕಗಳು ಮುಂದಿನ ಹಂತದ ತೇಗ೯ಡೆಗೆ ಲೆಕ್ಕಕ್ಕೆ ಬಂದರೆ ಎರಡು ಪರೀಕ್ಷೆಗಳನ್ನು ಉತ್ತೀರ್ಣವಾ ವಾದರೆ ಸಾಕು. ಈ ಏಳು ಪತ್ರಿಕೆಗಳಲ್ಲಿ 5 ಪತ್ರಿಕೆಗಳು ಎಲ್ಲರಿಗೂ ಸಮಾನವಾಗಿದ್ದರೆ ಒಂದು ಇಚ್ಚಿಕ ವಿಷಯದ ಮೇಲೆ ಎರಡು ಪತ್ರಿಕೆಗಳಿರುತ್ತವೆ. ಈ ಎಲ್ಲಾ ಪತ್ರಿಕೆಗಳನ್ನು ಲಿಖಿತ ರೂಪದಲ್ಲಿ ಇರುವುದರಿಂದ ಅಭ್ಯರ್ಥಿಗಳು ಅವರ ವಿಚಾರಗಳನ್ನು ಸ್ಪಷ್ಟವಾದ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ.
ಸಮಯದ ಸರಿಯಾದ ಉಪಯೋಗ, ಪ್ರಶ್ನೆಗೆ ನಿಖರವಾದ ಉತ್ತರ ಬರೆಯುವ ಕ್ಷಮತೆ ಈ ಪರೀಕ್ಷೆಗಳಲ್ಲಿತೇಗ೯ಡೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ವಿಷಯ ಜ್ಞಾನ ಜೊತೆ ಜೊತೆಗೆ ಅಭ್ಯರ್ಥಿಯ ವಿಶ್ಲೇಷಣೆ ಸಾಮರ್ಥ್ಯ, ವಿಷಯವನ್ನು ಪ್ರಸ್ತುತಪಡಿಸುವ ಕೌಶಲ್ಯಗಳನ್ನು ಅಭ್ಯರ್ಥಿಗಳು ಉತ್ತಮಪಡಿಸಿಕೊಳ್ಳಬೇಕು. ಇದಕ್ಕೆ ಅಣುಕು ಪರೀಕ್ಷೆಗಳನ್ನು (Mock tests) ಬರೆಯುವುದು ಅತಿ ಅವಶ್ಯಕವಾಗುತ್ತದೆ. .
ಬರವಣಿಗೆಯ ಅಭ್ಯಾಸ ಈ ಪರೀಕ್ಷೆಗಳಲ್ಲಿ ಉತ್ತೀಣ೯ರಾಗಲು ಅತಿ ಅವಶ್ಯಕ.ಹೀಗೆ ಬರೆದ ಉತ್ತರಗಳನ್ನು ಶಿಕ್ಷಕರಿಂದ ಹಾಗೂ ಸಹ ವಿದ್ಯಾರ್ಥಿಗಳ ಸಲಹೆ ಸೂಚನೆಗಳ ಮೂಲಕ ಉತ್ತಮ ಗೊಳಿಸಿಕೊಳ್ಳಬೇಕಾಗುತ್ತದೆ.
ಈಗ ನಾವು ನಾಗರಿಕ ಸೇವಾ ಆಯೋಗವು ನಡೆಸುವ ಪರೀಕ್ಷೆಗಳ ಬಗ್ಗೆ ಜನರು ಕೇಳುವ ಸಾಮಾನ್ಯ ಪ್ರಶ್ನೆಗಳ ಕುರಿತು ಗಮನ ಹರಿಸೋಣ.
UPSC/KPSC ಪರೀಕ್ಷೆಗೆ ಕೋಚಿಂಗ್ ಬೇಕೇ?
ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲಾ ವಿಷಯಗಳನ್ನೂ ಅಂತರ್ಜಾಲದ ಮೂಲಕ ಪಡೆಯಬಹುದಾಗಿದೆ. ಇದರಿಂದಾಗಿ ಸರಿಯಾದ ದಿಶೆಯಲ್ಲಿ ಓದಿದರೆ ಕೋಚಿಂಗ್ ಇಲ್ಲದೆಯೂ ಉತ್ತೀರ್ಣರಾಗಲು ಸಾಧ್ಯವಿದೆ. ಹೀಗಿದ್ದರೂ UPSC/KPSC ಪರೀಕ್ಷೆಯು ವಿಜ್ಞಾನ, ವಾಣಿಜ್ಯ, ಕಲೆ ಈ ಮೂರೂ ವಿಭಾಗಗಳ ತಿಳುವಳಿಕೆಯನ್ನು ಅಪೇಕ್ಷಿಸುತ್ತದೆ. ಸಾಮಾನ್ಯವಾಗಿ ಈ ಮೂರೂ ವಿಭಾಗಗಳ ತಿಳುವಳಿಕೆ ವಿದ್ಯಾರ್ಥಿಗಳಿಗೆ ಇಲ್ಲದಿರುವುದರಿಂದ, ಅವುಗಳನ್ನು ಅರ್ಥೈಸಿಕೊಳ್ಳಲು ಕೋಚಿಂಗ್ ನೆರವಾಗುತ್ತದೆ.
ಬಹಳಷ್ಟು ಸ್ವಯಂ ಅಧ್ಯಯನ( ಸೆಲ್ಫ್-ಸ್ಟಡಿ) ನಡೆಸುವ ವಿದ್ಯಾರ್ಥಿಗಳು ಅವಶ್ಯಕತೆ ಇರುವುದಕ್ಕಿಂತ ಇಲ್ಲದಿರುವುದನ್ನೇ ಹೆಚ್ಚು ಓದುವದನ್ನು ಗಮನಿಸಬಹುದು. ಕೋಚಿಂಗ್ ಪಡೆಯುವದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಲಭಿಸುತ್ತದೆ ಹಾಗೂ ಅನವಶ್ಯಕ ವಿಷಯಗಳ ಅಧ್ಯಯನವನ್ನು ಕಡಿಮೆಗೊಳಿಸಬಹುದು.
ಆದರೆ ವಿದ್ಯಾರ್ಥಿಗಳು ಕೋಚಿಂಗ್ ಸೇರುವ ಮೊದಲು ಕೋಚಿಂಗ್ ನೀಡುವ ಸಂಸ್ಥೆಯ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕುವುದು ಅತ್ಯಗತ್ಯ . ಬಹಳಷ್ಟು ಕೋಚಿಂಗ್ ಸಂಸ್ಥೆಗಳು ನಿಮ್ಮ ಊರಿಗೆ ಹತ್ತಿರ ಎಂಬ ಕಾರಣಕ್ಕೆ, ಕಡಿಮೆ ಶುಲ್ಕದಲ್ಲಿ ತರಬೇತಿ ನೀಡಲಾಗುವುದು ಎಂದೋ ಅಥವಾ ನಿರ್ದಿಷ್ಟ ಸಮಯಕ್ಕೆ ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆಯಿಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಿ ಮಾರ್ಕೇಟಿಂಗ್ ಮಾಡುವ ಮೂಲಕ ವಿದ್ಯಾರ್ಥಿಗಳ ಹಣ ಮತ್ತು ಸಮಯವನ್ನು ವ್ಯರ್ಥಗೊಳಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಈ ವಿಷಯದಲ್ಲಿ ಅತಿಯಾದ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.
UPSC/KPSC ಪರೀಕ್ಷೆಯ ತಯಾರಿ ಕೆಲಸದ ಜೊತೆ ಜೊತೆಗೆ ಸಾಧ್ಯವೇ?
ಈ ಪರೀಕ್ಷೆಯ ತಯಾರಿಯಲ್ಲಿ ವಿದ್ಯಾರ್ಥಿಗಳು ಬಹಳಷ್ಟು ವಿಷಯಗಳನ್ನು ಓದಿ ಅರ್ಥೈಸಿಕೊಳ್ಳಬೇಕಾಗಿರುವದರಿಂದ, ಕೆಲಸ ಓದುಗಳೆರಡನ್ನು ಒಟ್ಟಿಗೆ ನಿಭಾಯಿಸುವುದು ಕಷ್ಟ ಸಾಧ್ಯ. ಹೀಗಿದ್ದರೂ ಪ್ರತಿವರ್ಷವೂ ಕೆಲ ವಿದ್ಯಾರ್ಥಿಗಳು ಕೆಲಸದ ಜೊತೆ ಜೊತೆಗೆ ತಯಾರಿ ನಡೆಸಿ ಉತ್ತೀರ್ಣರಾಗುತ್ತಿದ್ದಾರೆ.
ಹೀಗೆ ಅಧ್ಯಯನ ನಡೆಸಬಯಸುವವರು ಪರೀಕ್ಷೆಗೆ 1.5 – 2 ವರ್ಷ ಮೊದಲಿನಿಂದಲೇ ತಯಾರಿ ಆರಂಭಿಸಬೇಕು. ಪ್ರತಿದಿನ ಕನಿಷ್ಠ 4-5 ಗಂಟೆ ಹಾಗೂ ವಾರಾಂತ್ಯ 8-10 ಗಂಟೆಗಳನ್ನು ಅಧ್ಯಯನಕ್ಕೆ ಮೀಸಲಾಗಿಡಬೇಕಾಗುತ್ತದೆ.
ಐಚ್ಛಿಕ ವಿಷಯ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು?
ವಿದ್ಯಾರ್ಥಿಗಳು ಇದೇ ವಿಷಯವನ್ನು ತೆಗೆದುಕೊಳ್ಳಬೇಕು ಎಂಬ ನಿಯಮವಿಲ್ಲ.ವಿದ್ಯಾರ್ಥಿಗೆ ವಿಷಯ ಜ್ಞಾನವುಳ್ಳ ಮತ್ತು ಆಸಕ್ತಿ ಹೊಂದಿರುವ 3-4 ವಿಷಯಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ನಂತರ ಆ ವಿಷಯಗಳ ಸಿಲೆಬಸ್ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಬೇಕು. ಆಸಕ್ತಿ, ಕೋಚಿಂಗ್ ಮಟೀರಿಯಲ್ ನ ಲಭ್ಯತೆ, ವಿಷಯ ಜ್ಞಾನ ಮೊದಲಾದ ಅಂಶಗಳನ್ನು ಗಮನಿಸಿ ಐಚ್ಛಿಕ ವಿಷಯದ ಆಯ್ಕೆಯನ್ನು ಅಂತಿಮಗೊಳಿಸಬೇಕು.
UPSC ಮತ್ತು KPSC ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸ?
ಬಹಳಷ್ಟು ಬಾರಿ ಈ ಎರಡು ಪರೀಕ್ಷೆಗೆ ಒಟ್ಟಿಗೆ ತಯಾರಿ ನಡೆಸಬಹುದೇ ಎಂಬ ಗೊಂದಲ ಬಹಳಷ್ಟು ವಿದ್ಯಾಥಿ೯ಗಳಿಗೆ ಬಂದಿರುತ್ತದೆ. ಆದ್ದರಿಂದ ಈ ಎರಡು ಪರೀಕ್ಷೆಗಳ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಅರಿಯುವುದು ಮುಖ್ಯ.
ಪಠ್ಯಕ್ರಮ, ವಿಷಯ, ಪರೀಕ್ಷಾ ಹಂತಗಳ ದೃಷ್ಟಿಯಿಂದ ಕೇಂದ್ರ ಲೋಕಸೇವಾ ಆಯೋಗವು (UPSC) ನಡೆಸುವ Civil services Eaxamination ಮತ್ತು ರಾಜ್ಯ ಲೋಕಸೇವಾ ಆಯೋಗವು ನಡೆಸುವ gazetted probationers ಪರೀಕ್ಷೆಗಳು ಬಹಳ ಸಾಮ್ಯತೆಯನ್ನು ಹೊಂದಿದೆ. (ಇನ್ನು ಮುಂದೆ ಓದುಗರು KPSC ಎಂಬಲ್ಲಿ ರಾಜ್ಯ ಲೋಕಸೇವಾ ಆಯೋಗವು ನಡೆಸುವ gazetted probationers ಪರೀಕ್ಷೆಗಳು ಎಂದು ಅಥೈ೯ಸಿಕೊಳ್ಳಬೇಕು.)
UPSC ಪರೀಕ್ಷೆಗಳು ಪ್ರತಿವಷ೯ವೂ ಆಯೋಜಿಸಲ್ಪಡುತ್ತವೆ. ಆದರೆ KPSC ಪರೀಕ್ಷೆಗಳು ಹಲವು (೩-೪) ವಷ೯ಗಳಿಗೊಮ್ಮೆ ಆಯೋಜಿಸಲ್ಪಡುತ್ತವೆ. ಆದ್ದರಿಂದ KPSC ಪರೀಕ್ಷೆಗಳಿಗಾಗಿಯೇ ಅಭ್ಯಥಿ೯ಗಳು ಅಧ್ಯಯನ ನಡೆಸುವುದು ಅಷ್ಟು ಸಮಂಜಸವಲ್ಲ.
UPSC ಪರೀಕ್ಷೆಗಳಲ್ಲಿ ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ, ಕಲೆ ಮತ್ತು ಸಂಸ್ಕೃತಿ, ಸಂವಿಧಾನ, ಜೊತೆ ಜೊತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪರಿಣಿತಿಯನ್ನು ಹೊಂದಿರುವ ಅವಶ್ಯಕತೆ ಇರುತ್ತದೆ. ಆದರೆ KPSC ಪರೀಕ್ಷೆಗಳಲ್ಲಿ ಭಾರತದ ಸಮಗ್ರ ಜ್ಞಾನದ ಜೊತೆಗೆ ಕನಾ೯ಟಕದ ಇತಿಹಾಸ, ಭೂಗೋಳ,ಇತಿಹಾಸ, ಆಥಿ೯ಕತೆಗಳ ಜ್ಞಾನ ಅಗತ್ಯ.
ಈ ಎಲ್ಲಾ ಕಾರಣಗಳಿಂದ ವಿದ್ಯಾಥಿ೯ಗಳು UPSC ಪರೀಕ್ಷೆಗೇ ಮೊದಲ ಆದ್ಯತೆ ನೀಡಬೇಕು. ಎರಡನೇ ಆಯ್ಕೆಯಾಗಿ KPSC ಪರೀಕ್ಷೆಗಳನ್ನು ಇರಿಸಿಕೊಳ್ಳುವುದು ಉತ್ತಮ. KPSC ಪರೀಕ್ಷೆಗಳಲ್ಲಿ UPSCಗೆ ಹೋಲಿಸಿದರೆ ಸ್ಪರ್ಧೆ ಕಡಿಮೆ ಇರುವುದರಿಂದ ಒಂದುವೇಳೆ UPSCಯಲ್ಲಿ ತೇಗ೯ಡೆ ಆಗದಿದ್ದ ಪಕ್ಷದಲ್ಲಿ ಸಹಾಯಕ್ಕೆ ಬರುತ್ತದೆ.
ಪರೀಕ್ಷೆಯ ತಯಾರಿಯಲ್ಲಿ ಬರುವ ಸವಾಲುಗಳು
ಇದರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಎಂದರೆ ‘ಸಮಯದ ನಿರ್ವಹಣೆ‘. ಇದು ಅಭ್ಯಾಸ ಮಾಡುವಾಗ ಹಾಗೂ ಪರೀಕ್ಷೆಗಳೆರಡರಲ್ಲೂ ಅತ್ಯಂತ ಮುಖ್ಯವಾದ ಅಂಶವಾಗಿದೆ.
ವಿದ್ಯಾರ್ಥಿಗಳು ಪ್ರತಿನಿತ್ಯದ ಸ್ಪಷ್ಟ ದಿನಚರಿ ಹೊಂದಿರುವುದು ಉತ್ತಮ. ದಿನದ ಸಮಯವನ್ನು ದಿನಪತ್ರಿಕೆ ಓದಲು, ಪ್ರತಿ ವಿಷಯದ ತಯಾರಿಗೆ ನಿರ್ದಿಷ್ಟ ಸಮಯ, ಓದಿದ ವಿಷಯಗಳ ಪುನಾರಾವರ್ತನೆ, ಬರವಣಿಗೆಯ ಅಭ್ಯಾಸ, ಐಚ್ಛಿಕ ವಿಷಯದ ತಯಾರಿ ಹೀಗೆ ವಿಭಾಗಗಳನ್ನಗಿಸಿಕೊಂಡು ಅವೆಲ್ಲವನ್ನೂ ಪೂರೈಸಬೇಕಾಗುತ್ತದೆ.
ವಿದ್ಯಾರ್ಥಿಗಳು ಯಾವುದನ್ನು ಓದಬೇಕು ಎನ್ನುವುದರ ಜೊತೆ ಜೊತೆಗೆ ಯಾವುದನ್ನು ಓದಬಾರದು ಎಂಬುದನ್ನೂ ಸಹ ಸ್ಪಷ್ಟವಾಗಿ ಅರಿಯಬೇಕು. ಇದರಿಂದ ಬಹಳಷ್ಟು ಸಮಯ ಪೋಲಾಗುವುದನ್ನು ತಡೆಯಬಹುದು ಮತ್ತು ವಿದ್ಯಾರ್ಥಿಗಳು ಅಣಕು ಪರೀಕ್ಷೆಗಳನ್ನು( Mock test) ಬರೆಯುವುದರ ಮೂಲಕವೂ ಸಹ ಪರೀಕ್ಷೆಯಲ್ಲಿ ಸಮಯದ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ಅರಿಯಬೇಕು.
ಆರ್ಥಿಕ ಸವಾಲುಗಳು:
ಬಹಳಷ್ಟು ವಿದ್ಯಾರ್ಥಿಗಳಿಗೆ ಕೋಚಿಂಗ್ ಫ಼ೀಸ್ ಕೊಡುವ ಅಥವಾ ಅಧ್ಯಯನ ನಡೆಸಲು ಬೇಕಾದ ಆರ್ಥಿಕ ಬೆಂಬಲ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳು ಖಾಸಗಿ ಉದ್ಯೋಗವನ್ನು ಮಾಡುತ್ತಲೇ ಪ್ರಯತ್ನವನ್ನು ನಡೆಸಬಹುದು.
UPSC ಯ ಜೊತೆ ಜೊತೆಗೆ KPSC, ಬ್ಯಾಂಕಿಂಗ್, SSC ಮೊದಲಾದ ಪರೀಕ್ಷೆಗಳ ತಯಾರಿ ನಡೆಸಿ ಉತ್ತೀರ್ಣರಾದರೆ ಈ ಕೆಲಸಗಳ ಜೊತೆಗೆ ಅಭ್ಯಾಸ ಮುಂದುವರೆಸುವ ಅವಕಾಶವೂ ಇರುತ್ತದೆ.
ಭಾವನಾತ್ಮಕ ಸಮಸ್ಯೆಗಳು:
ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೆಲವೇ ಸೀಟುಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಪ್ರಯತ್ನಿಸುತ್ತಿರುತ್ತಾರೆ. ಇದರಿಂದಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಒಂದಕ್ಕಿಂತ ಹೆಚ್ಚು ಪ್ರಯತ್ನದ ಅವಶ್ಯಕತೆಯಿರುತ್ತದೆ. ಹಲವು ಪ್ರಯತ್ನಗಳ ಹೊರತಾಗಿಯೂ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ( ಮೇನ್ಸ್), ಅಥವಾ ಇಂಟರ್ವ್ಯೂನಲ್ಲಿ ಉತ್ತೀರ್ಣರಾಗದೇ ಇರುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಅತಿ ಅವಶ್ಯ. ಅದರ ಜೊತೆಗೆ ವಿದ್ಯಾರ್ಥಿಗಳ ತಂದೆ ತಾಯಂದಿರೂ ಸಹ ಮಾನಸಿಕವಾಗಿ ಸಿದ್ಧರಾಗಿರಬೇಕಾದ ಅವಶ್ಯಕತೆಯಿರುತ್ತದೆ. ಈ ಪರೀಕ್ಷೆಗಳು ಕೇವಲ ವಿದ್ಯಾರ್ಥಿಯ ಹೋರಾಟವಷ್ಟೇ ಆಗಿರದೇ ಅದರ ಜೊತೆಗೆ ಪಾಲಕರು ಮತ್ತು ಕುಟುಂಬದ ಸಹಕಾರವೂ ಅಷ್ಟೇ ಮುಖ್ಯವಾಗಿರುತ್ತದೆ..
ಯೋಜನೆ ಬಿ (Plan B)ಯ ಅವಶ್ಯಕತೆ
UPSC ಭಾರತದ ಅತಿ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು. ಹಲವಾರು ವರ್ಷಗಳ ಸತತ ಪರಿಶ್ರಮದ ಹೊರತಾಗಿಯೂ ಅಭ್ಯರ್ಥಿಯು ಉತ್ತೀರ್ಣವಾಗದೇ ಇರುವ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ ಅಭ್ಯರ್ಥಿಯು ಪರ್ಯಾಯ ಉಪಾಯವನ್ನು ಹೊಂದಿರುವುದು ಉತ್ತಮ.ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹಲವಾರು ಕೋಚಿಂಗ್ ಸಂಸ್ಥೆಗಳಲ್ಲಿ ತರಬೇತಿ ನೀಡುವ ಅವಕಾಶವಿರುತ್ತದೆ.
ಇದಲ್ಲದೆಯೂ UPSC ಜೊತೆಯಲ್ಲೇ KPSC, SSC, RBI, NABARD, ಬ್ಯಾಂಕಿಂಗ್ ಮುಂತಾದ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಬಹುದು. ತಮ್ಮ ಪದವಿಗೆ ಸಂಬಂಧಿಸಿದ ಕ್ಷೇತ್ರದಲ್ಲೂ ಸಹ ಮುಂದುವರೆಯಬಹುದು.
ಒಟ್ಟಿನಲ್ಲಿ ಹೇಳುವುದಾದರೆ ವಿದ್ಯಾರ್ಥಿಗಳು ಪರ್ಯಾಯ ಉಪಾಯವನ್ನು ಹೊಂದಿರುವುದಂತೂ ಭವಿಷ್ಯದ ದೃಷ್ಟಿಯಿಂದ ಅತಿ ಅವಶ್ಯ.
Civil Services ಪರೀಕ್ಷೆಗಳ ತಯಾರಿಯಂತಹ ವಿಷಯವನ್ನು ಒಂದು ಲೇಖನದಲ್ಲಿ ಹೇಳುತ್ತೇನೆಂದು ಹೊರಟರೆ ಅಂಗೈಯಲ್ಲಿ ಸಮುದ್ರವನ್ನು ತೋರಿಸಿದಂತೆ ಸರಿ. ಆದ್ದರಿಂದ ಆಸಕ್ತ ವಿದ್ಯಾಥಿ೯ಗಳು, ಪಾಲಕರು….Link It to Swarna Rashmi Initiatives.
