ನೀವೇನಾದರೂ ‘ಪೀಪಲ್ಸ್ ರೋಡ್’ ಅನ್ನುವ ಹೆಸರನ್ನು ಕೇಳಿದ್ದೀರಾ? ಈ ದಾರಿ ಮಣಿಪುರ ನಾಗಾಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳನ್ನು ಸೇರಿಸುತ್ತದೆ. ಗುಡ್ಡಗಾಡಿನ ಪ್ರದೇಶದಲ್ಲಿರುವ ಈ ರಾಜ್ಯಗಳನ್ನು ಸಂಪರ್ಕಿಸಲು ಮಾರ್ಗಗಳು ಇಲ್ಲದಿರುವಾಗ ಆರ್ಮ್ ಸ್ಟ್ರಾಂಗ್ ಪಾಮೆ ಎಂಬ ಐಎಎಸ್ ಅಧಿಕಾರಿ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ದಾರಿ ಇದಾಗಿದೆ. ಇದು ಹೆಸರೇ ಹೇಳುವಂತೆ ಜನರ ದಾರಿ. ಜನರ ಸಹಕಾರದ ಫಲವಾಗಿ ನಿರ್ಮಾಣಗೊಂಡ ದಾರಿ. ಯಾವುದೇ ಸರ್ಕಾರದ ನೆರವಿಲ್ಲದೆ ಆರ್ಮ್ ಸ್ಟ್ರಾಂಗ್ ಪಾಮೆಯವರ ಮುಂದಾಳತ್ವದಲ್ಲಿ ಈ ದಾರಿಯ ನಿರ್ಮಾಣವಾಯಿತು. ಇವರ ಈ ಸಾಧನೆಗೆ ಇವರನ್ನು ಮಿರಾಕಲ್ ಮ್ಯಾನ್ ಎಂದು ಕರೆಯುತ್ತಾರೆ.
ಒಬ್ಬ ನಾಗರಿಕ ಸೇವಾ ಅಧಿಕಾರಿಯು ಅಂತಹ ಪವಾಡಗಳನ್ನು ಸೃಷ್ಟಿಸಲು ಸಾಧ್ಯವಾದರೆ, ಪ್ರತಿ ವರ್ಷ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ನೂರಾರು ನಾಗರಿಕ ಸೇವಕರ ಸಾಮರ್ಥ್ಯವನ್ನು ಕಲ್ಪಿಸಿಕೊಳ್ಳಿ!
ಭಾರತದಲ್ಲಿ ನಾಗರಿಕ ಸೇವೆಗಳ ( ಲೋಕ ಸೇವೆ) ಇತಿಹಾಸ:
ನಮ್ಮ ಪುರಾಣವನ್ನು ನೋಡಿದರೆ ಶ್ರೀಕೃಷ್ಣನೇ ನಮಗೆ ತಿಳಿದಿರುವ ಅತ್ಯಂತ ಮುತ್ಸದ್ದಿ ರಾಜತಾಂತ್ರಿಕ. ಕೃಷ್ಣ ಸಂಧಾನದಲ್ಲಿ ಕೃಷ್ಣನು ತನ್ನ ರಾಜತಾಂತ್ರಿಕ ಚಾತುರ್ಯದಿಂದ ಸಂಪೂರ್ಣ ಸಭೆಯನ್ನು ವಿಸ್ಮಿತವಾಗಿಸುವ ಮೂಲಕ ಯುದ್ಧಕ್ಕಿಂತ ಮೊದಲೇ ಅರ್ಧ ಯುದ್ಧವನ್ನು ಪಾಂಡವರಿಗೆ ಗೆದ್ದುಕೊಟ್ಟುಬಿಡುತ್ತಾನೆ.
ಭಾರತದ ಇತಿಹಾಸವನ್ನು ಗಮನಿಸಿದಾಗ ಸುಮಾರು 2300 ವರ್ಷಗಳ ಹಿಂದಿಗಿಂತ ಮೊದಲೇ ಶಿಸ್ತಿನ ಆಡಳಿತ ವ್ಯವಸ್ಥೆಯನ್ನು ಮೌರ್ಯರ ಕಾಲದಲ್ಲಿ ಗಮನಿಸಬಹುದು. ಆಡಳಿತ ಅನುಕೂಲಕ್ಕಾಗಿ ಹಲವಾರು ವಿಭಾಗಗಳನ್ನು ಮಾಡಿ ಆಡಳಿತ ನಡೆಸಿರುವುದು ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಕಂಡುಬರುತ್ತದೆ. ಇಂತಹ ಉಲ್ಲೇಖಗಳು ನಮ್ಮ ಪುರಾಣ ಇತಿಹಾಸಗಳ ಕಾಲದಿಂದಲೇ ನಾಗರಿಕ ಸೇವೆಗಳು ಎಷ್ಟು ಮಹತ್ವವನ್ನು ಹೊಂದಿದ್ದವು ಎಂಬುದನ್ನು ಸೂಚಿಸುತ್ತವೆ.
ಬ್ರಿಟಿಷರು ಮೊದಲ ಬಾರಿಗೆ ಅಧಿಕೃತವಾಗಿ ‘ಭಾರತೀಯ ಲೋಕ ಸೇವೆ’ಗಳನ್ನು ಸ್ಥಾಪಿಸಿದರು. ಚಾರ್ಲ್ಸ್ ಕಾರ್ನವಾಲೀಸರನ್ನು ಭಾರತೀಯ ಲೋಕ ಸೇವೆಗಳ ಜನಕ ಎಂದು ಕರೆಯುತ್ತಾರೆ. ಇದರ ಉದ್ದೇಶ
ಭಾರತದ ಉನ್ನತಿಗಿಂತ ಬ್ರಿಟಿಷರ ರಾಜ್ಯಭಾರವನ್ನು ಸುಗಮಗೊಳಿಸುವುದೇ ಆಗಿತ್ತು. ಬ್ರಿಟಿಷರು ಪರಿಚಯಿಸಿದ ಈ ಭಾರತೀಯ ಲೋಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯರಿಗೇ ಸ್ಪರ್ಧಿಸಲು ಅವಕಾಶವಿರಲಿಲ್ಲ. ಈ ಪರೀಕ್ಷೆಗಳನ್ನು ಇಂಗ್ಲೆಂಡಿನಲ್ಲಿ ಏರ್ಪಡಿಸುತ್ತಿದ್ದರು. ಈ ಎಲ್ಲ ಕಷ್ಟಗಳ ನಡುವೆಯೂ ಹಲವಾರು ಭಾರತೀಯರು ಸಿವಿಲ್ ಸರ್ವಿಸನ್ನು ಪ್ರವೇಶಿಸಿದ್ದರು. ಅವರಲ್ಲಿ ಮುಂಚೂಣಿಯಲ್ಲಿ ಕಾಣಸಿಗುವ ಹೆಸರೆಂದರೆ ಶ್ರೀ ಸುಭಾಷ್ ಚಂದ್ರ ಬೋಸ್, ಸತ್ಯೇಂದ್ರ ನಾಥ್ ಟಾಗೋರ್ ಮೊದಲಾದವು.
ಭಾರತದ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲು ಈ ಲೋಕ ಸೇವಾ ವ್ಯವಸ್ಥೆಯ ಅನಿವಾರ್ಯತೆ ಮತ್ತು ಮಹತ್ವವನ್ನು ಅರಿತು ಅವುಗಳನ್ನು ಸ್ವಾತಂತ್ರ್ಯಾ ನಂತರವೂ ಮುಂದುವರೆಸಿದ ಶ್ರೇಯ ಸರ್ದಾರ್ ವಲ್ಲಭ ಭಾಯ್ ಪಟೇಲರಂತಹ ನಾಯಕರುಗಳಿಗೆ ಸಲ್ಲುತ್ತದೆ. ಈ ರೀತಿಯಲ್ಲಿ ಭಾರತೀಯ ನಾಗರಿಕ ಸೇವೆಯು ಭಾರತದಲ್ಲಿ ಬೆಳೆದು ಬಂದಿದೆ.
ನಾಗರಿಕ ಸೇವೆಗಳ ಅವಶ್ಯಕತೆ
ಒಂದರ್ಥದಲ್ಲಿ ನಾಗರಿಕ ಸೇವೆಗಳು ಎಲೆ ಮರೆಯ ಕಾಯಿಯಂತೆ. ಇವು ದೇಶದ ಚಾಲನಾ ಶಕ್ತಿಯಾಗಿ ಕೆಲಸ ಮಾಡಿದರೂ ಬೆಳಕಿಗೆ ಬರುವ ನಿದರ್ಶನಗಳು ಕಡಿಮೆ.
ಸರ್ಕಾರದ (ಕಾರ್ಯಾಂಗ) ತೆರೆಯ ಹಿಂದಿನ ಚಾಲನಾ ಶಕ್ತಿಯಾಗಿ ನಾಗರಿಕ ಸೇವಕರು( Civil servants) ಖಾಯಮ್ ಉದ್ಯೋಗಿಗಳಂತೆ ಕೆಲಸ ನಿರ್ವಹಿಸುತ್ತಾರೆ. ಸರ್ಕಾರದ ಹಲವು ಯೋಜನೆಗಳಿಗೆ ಮೂರ್ತ ರೂಪ ಕೊಟ್ಟು , ಅದರ ಸಾಧ್ಯತೆ ಭಾದ್ಯತೆಗಳನ್ನು ವಿಮರ್ಶಿಸಿ ಜನಸಾಮಾನ್ಯರನ್ನು ತಲುಪುವವರೆಗೆ ಎಲ್ಲಾ ಕಾರ್ಯಗಳನ್ನು ನಾಗರಿಕ ಸೇವೆಗಳು ನಿರ್ವಹಿಸುತ್ತವೆ.
ಭಾರತ ಸ್ವಾತಂತ್ರ್ಯ ಪಡೆದಾಗ ಹಲವಾರು ತಜ್ಞರು, ವಿಮರ್ಶಕರು ಭಾರತ ಕೆಲವೇ ವರ್ಷಗಳಲ್ಲಿ ಛಿದ್ರ ಛಿದ್ರವಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಇದಕ್ಕೆ ವಿರುದ್ಧವಾಗಿ, ಎರಡನೇ ಮಹಾಯುದ್ಧದ ನಂತರ ಸ್ವತಂತ್ರಗೊಂಡ ನೂರಾರು ದೇಶಗಳಲ್ಲಿ ಪ್ರಜಾತಂತ್ರ ಗಣರಾಜ್ಯವಾಗಿ ಯಶಸ್ವಿಯಾಗಿ ಮುಂದುವರೆದು ಬಂದಿರುವ ಕೆಲವೇ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಇಂತಹ ಸಾಧನೆಗೆ ಮುಖ್ಯವಾದ ಕಾರಣ ನಮ್ಮ ಚುನಾವಣಾ ವ್ಯವಸ್ಥೆ. ಕೇವಲ 12% ವಿದ್ಯಾವಂತರಿದ್ದ ಆ ಕಾಲದಲ್ಲಿ ಯಶಸ್ವಿಯಾಗಿ ಚುನಾವಣಾ ವ್ಯವಸ್ಥೆಯನ್ನು ರೂಪಿಸಿದ ಶ್ರೀ. ಸುಕುಮಾರ್ ಸೇನ್ ಅವರು ಒಬ್ಬ ಸಿವಿಲ್ ಸರ್ವಂಟ್ ಎಂಬುದನ್ನು ಗಮನಿಸಬೇಕು. ಇಂತಹ ಹಲವಾರು ವ್ಯವಸ್ಥೆಗಳ ರಚನೆ ಮತ್ತು ಯಶಸ್ವೀ ಆಚರಣೆಗೆ ಸಿವಿಲ್ ಸರ್ವಂಟ್ಸ್ ಗಳ ಕೊಡುಗೆ ಅಗಣ್ಯವಾದುದು.
ಇಂದು ನ್ಯಾಟೊ (NATO) ಬಣ ಮತ್ತು ರಷ್ಯಾ- ಚೀನಾ ಬಣಗಳ ನಡುವಿನ ಸಂಘರ್ಷದಲ್ಲಿ ಇತರ ದೇಶಗಳು ಯಾವುದಾದರೂ ಒಂದು ಬಣವನ್ನು ಬೆಂಬಲಿಸಲೇಬೇಕಾದ ಪರಿಸ್ಥಿತಿಯಿದೆ. ಆದರೆ ಒಂದೆಡೆ ರಷ್ಯಾದ ಜೊತೆ ತೈಲವನ್ನೂ ಪಡೆಯುತ್ತಾ ಮತ್ತೊಂದೆಡೆ ಅಮೆರಿಕಾದ ಜೊತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾ ವಿಶ್ವ ಮಿತ್ರನಾಗಿ ಬೆಳೆಯುತ್ತಿರುವ ದೇಶ ಭಾರತ. ಹೀಗೆ ಎರಡೂ ಬಣಗಳನ್ನು ಸರಿದೂಗಿಸಿಕೊಂಡು ದೇಶದ ಹಿತಕ್ಕಾಗಿ ಅವಶ್ಯವಿರುವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಭಾರತೀಯ ವಿದೇಶಾಂಗ ಸಚಿವರಾದ ಡಾ.ಜೈ ಶಂಕರ್ ರವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಇದಕ್ಕಿಂತ ಮೊದಲು ನಾಗರಿಕ ಸೇವೆಯ ಅಂಗವಾದ ಭಾರತೀಯ ವಿದೇಶಾಂಗ ಸೇವೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು ಎಂಬುದು ಗಮನಾರ್ಹ.
ಒಬ್ಬ IAS ಅಧಿಕಾರಿಯು ಜಿಲ್ಲಾ ಮಟ್ಟದ ಆಡಳಿತದಲ್ಲಿ ಜನಪರ ಯೊಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಇಂಡಿಯನ್ ರೆವಿನ್ಯೂ ಸರ್ವೀಸ್ ಅಂದರೆ ಭಾರತೀಯ ಆದಾಯ ಸೇವಾ ಅಧಿಕಾರಿಗಳು ಸರ್ಕಾರ ತನ್ನ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಹಣವನ್ನು ತೆರಿಗೆಯ ರೂಪದಲ್ಲಿ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ನಾಗರಿಕ ಸೇವೆಗಳು ಎಂದಾಕ್ಷಣ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರಣವೆಂದರೆ IAS. IAS ಮಾತ್ರವಲ್ಲದೇ ಇನ್ನೂ ಹಲವು ಸೇವೆಗಳನ್ನು ನಾಗರಿಕ ಸೇವೆಯು ಒಳಗೊಂಡಿದೆ ಉದಾಹರಣೆಗೆ ಇಂಡಿಯನ್ ಪೊಲಿಸ್ ಸರ್ವೀಸ್, ಇಂಡಿಯನ್ ಫ಼ಾರಿನ್ ಸರ್ವೀಸ್, ಇಂಡಿಯನ್ ರೆವಿನ್ಯೂ ಸರ್ವೀಸ್, ಇಂಡಿಯನ್ ರೈಲ್ವೆ ಸರ್ವೀಸ್ ಇತ್ಯಾದಿ. ಹೀಗೆ ಹತ್ತಾರು ವಿವಿಧ ಸೇವೆಗಳ ಸಹಕಾರದ ಫಲವಾಗಿ ಆಡಳಿತ ವ್ಯವಸ್ಥೆ ಸಸೂತ್ರವಾಗಿ ನಡೆಯಲು ಸಾಧ್ಯ.
ಮಿಥ್ಯಾ ಕಲ್ಪನೆಗಳು
ಹಾಗೆ ನೋಡಿದರೆ ನಮ್ಮ ಉತ್ತರ ಕನ್ನಡದ ಜನ ಬಹಳಷ್ಟು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಆದರೆ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವವರ ಸಂಖ್ಯೆ ಹಾಗೂ ನಾಗರಿಕ ಸೇವೆಗಳಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳ ಸಂಖ್ಯೆ ಬಹಳ ಕಡಿಮೆ. ಇದಕ್ಕೆ ಕೆಲ ಕಾರಣಗಳನ್ನು ಶ್ರೀ ಸುಬ್ರಾಯ ಎಂ ಹೆಗಡೆ ಗೌರಿಬಣ್ಣಿಗೆ ಯವರು ತಮ್ಮ ಲೇಖನದಲ್ಲಿ ಹೇಳಿರುತ್ತಾರೆ. ಇದರ ಹೊರತಾದ ಇನ್ನೂ ಕೆಲವು ನಂಬಿಕೆಗಳು ಇಂತಿವೆ.
ಈ ನಾಗರಿಕ ಸೇವೆಗಳು ಸಾಮಾನ್ಯ ವರ್ಗದ (ಜನರಲ್ ಮೆರಿಟ್) ವಿದ್ಯಾರ್ಥಿಗಳಿಗಲ್ಲ, ಜನರಲ್ ಮೆರಿಟ್ ಗೆ ಯಾವುದೇ ರೀತಿಯ ಹುದ್ದೆಗಳು ಲಭ್ಯವಿರುವುದಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಇತ್ತೀಚೆಗೆ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ (Economically Weaker Sections) ರಿಸರ್ವೇಶನ್ ಎಂಬುದನ್ನು ತಂದಿದ್ದು ಇದು ಜನರಲ್ ಮೆರಿಟ್ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಇದರ ಹೊರತಾಗಿಯೂ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಗ್ರಾಮೀಣ ಕೋಟ, ಕನ್ನಡ ಮಾಧ್ಯಮದವರಿಗೆ ಮೀಸಲಾತಿ ಹೀಗೆ ಹಲವಾರು ಮೀಸಲಾತಿಗಳು ಲಭ್ಯವಿದ್ದು ಇದರ ಸದುಪಯೋಗವನ್ನು ಪ್ರತಿಭಾವಂತ ವಿದ್ಯಾರ್ಥಿಗಳು ಪಡೆಯಬಹುದಾಗಿದೆ.
ನಮ್ಮಲ್ಲಿರುವ ಮತ್ತೊಂದು ತಪ್ಪು ಕಲ್ಪನೆಯೆಂದರೆ ಸರ್ಕಾರಿ ನೌಕರಿ ಎಂದರೆ ಅದು ರಾಜಕಾರಣಿಗಳ ಕೈ ಕೆಳಗಿನ ಕೆಲಸ, ಎಲ್ಲವೂ ಅವರ ಮಾತಿನಂತೆಯೇ ನಡೆಯಬೇಕು ಎಂಬುದು. ಬೆರಳೆಣಿಕೆಯ ಸಂದರ್ಭಗಳಲ್ಲಿ ಮಾತ್ರ ಆ ರೀತಿ ನಡೆಯಬಹುದು.ಹಾಗೆ ನೋಡಿದರೆ ಪ್ರತಿಯೊಬ್ಬ ವ್ಯಕ್ತಿಯೂ ಮತ್ತೊಬ್ಬರಿಗೆ ಉತ್ತರಿಸಲೇಬೇಕಾದ ಅವಶ್ಯಕತೆ ಮತ್ತು ಜವಾಬ್ದಾರಿಯಿರುತ್ತದೆ. ಹೇಗೆ ಸರ್ಕಾರಿ ಉದ್ಯೋಗಿಯು ಸರ್ಕಾರಕ್ಕೆ ಉತ್ತರಿಸಬೇಕಾದ ಅವಶ್ಯಕತೆಯಿದೆಯೋ ಹಾಗೆಯೇ ಸರ್ಕಾರ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಹೊಣೆಯಿರುತ್ತದೆ. ಎಷ್ಟೋ ಕಡೆಗಳಲ್ಲಿ ನಾಗರಿಕ ಸೇವಕರು(ಸಿವಿಲ್ ಸರ್ವಂಟ್ಸ್) ಸರ್ಕಾರಕ್ಕೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಾ ಉತ್ತಮ ಆಡಳಿತಕ್ಕೆ ಸಹಾಯ ಮಾಡುತ್ತಿರುತ್ತಾರೆ.ಇದೊಂದು ಆಡಳಿತ ಚಕ್ರ. ಪ್ರತಿಯೊಬ್ಬರೂ ಅವರವರ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ಈ ಆಡಳಿತ ಚಕ್ರವು ಸುಗಮವಾಗಿ ಸಾಗಲು ಸಾಧ್ಯ.
ನಾಗರಿಕ ಸೇವೆಗಳನ್ನು ಏಕೆ ಆಯ್ದುಕೊಳ್ಳಬೇಕು?
ದೇಶ ಸೇವೆಗೆ ನಾಗರಿಕ ಸೇವೆಗಳಿಗಿಂತ ಉತ್ತಮವಾದ ಅವಕಾಶ ಬೇರೊಂದಿಲ್ಲ. ಬೇರೆ ಬೇರೆ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹಲವಾರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುವ, ದೇಶದ ಪ್ರಮುಖವಾದ ಕಾನೂನುಗಳನ್ನು ಸರ್ಕಾರದ ಮಹತ್ತರವಾದ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ, ದೇಶಕ್ಕೆ ಅಗತ್ಯವಾದ ತೆರಿಗೆಯನ್ನು ಸಂಗ್ರಹಿಸುವ ಹಾಗೂ ಇನ್ನೂ ಹಲವಾರು ಗುರುತರವಾದ ಜವಾಬ್ದಾರಿಗಳು ನಾಗರಿಕ ಸೇವೆಯಲ್ಲಿ ಅಭ್ಯರ್ಥಿಗಳು ನಿರ್ವಹಿಸಬೇಕಾಗುತ್ತದೆ.ಇದಕ್ಕಿಂತಲೂ ಹೆಚ್ಚಿನ ವೈವಿಧ್ಯತೆಯನ್ನು(diversified) ಹೊಂದಿರುವ ಕೆಲಸ ಬಹುಶಃ ಮತ್ಯಾವುದೂ ಇರಲಿಕ್ಕಿಲ್ಲ.
ನಾಗರಿಕ ಸೇವಾ ಪರೀಕ್ಷೆಗಳನ್ನು ಜಾತಿ,ಧರ್ಮ,ಕುಲ,ಲಿಂಗ,ವಿದ್ಯಾರ್ಹತೆ,ಆರ್ಥಿಕ ಸ್ಥಿತಿ ಎಂಬ ಭೇದ ಭಾವವಿಲ್ಲದೆ ಪ್ರತಿಯೊಬ್ಬ ಪದವಿಧರ ಬರೆಯಬಹುದು. ಒಬ್ಬ ಸಾಮಾನ್ಯ ವ್ಯಕ್ತಿ ದೇಶದ ಉನ್ನತ ಸ್ಥಾನದಲ್ಲಿ ಕಾಯ೯ನಿವ೯ಹಿಸಲು ನಾಗರಿಕ ಸೇವೆಗಳು ಉತ್ತಮ ಅವಕಾಶ ಒದಗಿಸುತ್ತದೆ.
ವಿಶ್ವೇಶ್ವರಯ್ಯನವರು ಅಭಿಯಂತರರು. ಅವರು ಮುಂದೆ ಮೈಸೂರು ರಾಜ್ಯದ ದಿವಾನರಾದರು. ಇದರಿಂದಾಗಿ ಕರ್ನಾಟಕದಲ್ಲಿ ಹಲವಾರು ಕೈಗಾರಿಕೆಗಳು, ಇಂಜಿನಿಯರಿಂಗ್ ಕಾಲೇಜ್ ಗಳು ಬಹಳ ಮೊದಲೇ ಆರಂಭವಾದವು. ಇದರಿಂದಾಗಿ ಕರ್ನಾಟಕ ಅದರಲ್ಲೂ ಮೈಸೂರು ಮತ್ತು ಸುತ್ತಮುತ್ತಲಿನ ಪ್ರಾಂತಗಳು ಇಂದಿಗೂ ತಂತ್ರಜ್ಞಾನದಲ್ಲಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ.ಹೀಗೇ ನಮ್ಮ ಊರಿನ, ನಮ್ಮ ಪ್ರಾಂತ್ಯದ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾದರೆ ಇಲ್ಲಿನ ಜನರ ಕಷ್ಟ ಸುಖಗಳು ಆಶೋತ್ತರಗಳನ್ನು ಹೆಚ್ಚಿನ ರೀತಿಯಲ್ಲಿ ಈಡೇರಿಸುವ ಅವಕಾಶವಾಗಬಹುದು.
ಹತ್ತು ಹಲವಾರು ನಾಗರಿಕ ಸೇವೆಗಳ ಫಲವಾಗಿ ಇಂದಿನ ಸರ್ಕಾರ ಹಾಗೂ ನಮ್ಮ ಪ್ರಜಾತಂತ್ರ ವ್ಯವಸ್ಥೆ ಸುಗಮವಾಗಿ ನಡೆಯುತ್ತಾ ಬಂದಿದೆ. ಇಂತಹ ವ್ಯವಸ್ಥೆ ಇನ್ನೂ ಉತ್ತಮವಾಗಿ ಹೊಸ ಕಾರ್ಯ ತಂತ್ರದೊಂದಿಗೆ ನಡೆಯಬೇಕೆಂದರೆ ಚಾಣಾಕ್ಷ, ಪ್ರಾಮಾಣಿಕ,ದಕ್ಷ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುವಂತಹ ನಾಗರಿಕ ಸೇವಾ ಅಧಿಕಾರಿಗಳು ಅತ್ಯವಶ್ಯ. ಇಂತಹ ನಾಗರಿಕ ಸೇವಾ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜಿಲ್ಲೆಯಿಂದಲೂ ಆರಿಸಿ ಬರಲಿ ಎಂಬುದೇ ಈ ಲೇಖನದ ಆಶಯ.